ಇತಿಹಾಸ

ಪುತ್ತೂರು ಪಟ್ಟಣದಿಂದ ಸುಳ್ಯ ಮಾರ್ಗದಲ್ಲಿ ಸಂಟ್ಯಾರು ಎಂಬಲ್ಲಿ ಬಲಕ್ಕೆ ತಿರುಗಿ 9 ಕಿ.ಮೀ ಪ್ರಯಾಣಿಸಿದಾಗ ಪ್ರಕೃತಿ ಮಧ್ಯೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಗೋಚರಿಸುತ್ತದೆ. ಕೃತ ಯುಗದಲ್ಲಿ ಶಿವಭಕ್ತನಾದ ಖರಾಸುರನೆಂಬ ಸಂಚಾರಿ ರಾಕ್ಷಸನಿದ್ದನಂತೆ. ಆತ ಕಾಶಿಯಿಂದ ಮೂರು ಲಿಂಗಗಳನ್ನು ಏಕ ಕಾಲದಲ್ಲಿ ಬಾಯಿ ಮತ್ತು ಎರಡು ಕೈಗಳಿಂದಲೂ ತಂದನಂತೆ. ಹಾಗೆ ತಂದ ಶಿವಲಿಂಗಗಳಿಗೆ ಪ್ರಾತಃ ಕಾಲದಲ್ಲಿಯೆ ಮೂರು ಹೊತ್ತಿನ ಪೂಜೆಯನ್ನು ಹೊತ್ತು ಹೊತ್ತಿಗೆ ಒಂದರಂತೆ ಪ್ರತ್ಯೇಕ ಪ್ರತ್ಯೇಕ ಲಿಂಗಗಳಂತೆ ಪೂಜೆ ಮಾಡಿ ವಿಸರ್ಜಿಸುತ್ತಿದ್ದನಂತೆ. ಆ ರೀತಿ ವಿಸರ್ಜಿಸಲ್ಪಟ್ಟ ಲಿಂಗಗಳ ಪೈಕಿ ಬಾಯಿಯಿಂದ ತಂದ ಲಿಂಗವು ಕೇರಳ ರಾಜ್ಯದ ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲೂ, ಎಡಕೈಯಿಂದ ತಂದ ಲಿಂಗ ಕಾಸರಗೋಡು ತಾಲೂಕಿನ ಮುಂಡೂರು ಗ್ರಾಮದ ಆಲಂಗೂಡ್ಲು ಎಂಬಲ್ಲೂ, ಬಲಕೈಯಿಂದ ತಂದ ಲಿಂಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕೊರಂದ್ರಪಾದೆ ಗುಡ್ಡದಲ್ಲೂ ಉದ್ಭವಿಸಿತಂತೆ. ಈ ರೀತಿ ಕೊರಂದ್ರೆಪಾದೆ ಗುಡ್ಡದಲ್ಲಿ ಉದ್ಭವಿಸಿದ ಲಿಂಗವನ್ನು ಋಷಿಯೊಬ್ಬರು ಪೂಜಿಸುತ್ತಿದ್ದ ಕಾಲಘಟ್ಟದಲ್ಲಿ ತನ್ನ ವೃದ್ಧಾಪ್ಯದ ಕಾರಣದಿಂದ ದೇವರಲ್ಲಿ ಪ್ರಾರ್ಥಿಸಿಕೊಂಡು ಬೆಟ್ಟಂಪಾಡಿ ಗ್ರಾಮದ ಮಧ್ಯ ಭಾಗವಾದ ಈಗ ಇರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿದರಂತೆ. ಈ ಮೂರು ಕ್ಷೇತ್ರಗಳೂ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದಿದೆ. ಕೆಲವು ವರ್ಷಗಳ ಹಿಂದೆ ಕೊರಂದ್ರಪಾದೆ ಗುಡ್ಡವು ಬಿಲ್ವ ಪತ್ರೆಯ ಗಿಡ ಮರ ಪೊದರುಗಳಿಂದ ಕೂಡಿತ್ತು. ನವೋದಯ ಪ್ರೌಢಶಾಲೆಯ ಆಟದ ಮೈದಾನದ ನಿರ್ಮಾಣದ ಸಂದರ್ಭದಲ್ಲಿ ಸಂಪೂರ್ಣ ನಾಶ ಮಾಡಲ್ಪಟ್ಟಿತು. ಈ ಸಂದರ್ಭದಲ್ಲಿ ನಾಗರ ಹಾವೊಂದು ಬಂದು ಅನೇಕ ದಿನಗಳ ತನಕ ಶಾಲೆಯಲ್ಲಿ ವಾಸವಾಗಿತ್ತು. ಪ್ರಖ್ಯಾತ ಜ್ಯೋತಿಷ್ಯರಲ್ಲಿ ಪ್ರಶ್ನಿಸಿದಾಗ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯನ್ನು ಕಟ್ಟಿಸಿ ಜಾತ್ರೋತ್ಸವ ಕಾಲದಲ್ಲಿ ದೇವರನ್ನಿಟ್ಟು ಕಟ್ಟೆಪೂಜೆಯನ್ನು ಮಾಡಬೇಕೆಂದು ಪರಿಹಾರ ತಿಳಿಸಿದರು. ಅದರಂತೆ ಕಟ್ಟೆಯನ್ನು ಕಟ್ಟಿ ಶುದ್ಧಕಳಸ ಮಾಡಿದ ಬಳಿಕ ಹಾವು ಮಾಯವಾಯಿತು. ಈ ಸಮಯದಲ್ಲೇ ಕೊರಂದಪಾದೆ ಗುಡ್ಡಕ್ಕೆ ಬಿಲ್ವಗಿರಿ ಎಂದು ಪುನರ್ ನಾಮಕರಣ ಮಾಡಲಾಯಿತು. ಈಗ ಬಿಲ್ವಗಿರಿಯೆಂದೇ ಪ್ರಸಿದ್ಧವಾಗಿದೆ. 

ವರ್ಷಂಪ್ರತಿ ಜಾತ್ರೋತ್ಸವ ನಡೆಯುವ ಕಾಲದಲ್ಲಿ ಇಲ್ಲಿಯ ಕಟ್ಟೆಗೂ ದೇವರ ಸವಾರಿ ಬರುತ್ತದೆ. ಆಗ ಕಟ್ಟೆಯಲ್ಲಿ ದೇವರನ್ನಿಟ್ಟು ಕಟ್ಟೆಪೂಜೆ ನಡೆಯುತ್ತದೆ. ಶ್ರೀ ಮಹಾಲಿಂಗೇಶ್ವರ ದೇವರು ಪ್ರಮುಖ ಆರಾಧ್ಯ ದೇವರಾಗಿಯೂ, ದೀಪಾರಾಧನೆ ಮತ್ತು ಗಣಹೋಮದ ಮೂಲಕ ಶ್ರೀದುರ್ಗೆ, ಶ್ರೀ ಗಣಪತಿ ಉಪದೇವತೆಗಳಾಗಿಯೂ ಆರಾಧಿಸಲ್ಪಡುತ್ತದೆ. ದೇವರಿಗೆ ರುದ್ರಾಭಿಷೇಕ, ಹಣ್ಣುಕಾಯಿ, ನೈವೇದ್ಯ ಸಮರ್ಪಣೆ, ಪೂಜೆ ನಡೆಯುತ್ತದೆ. ವಿಶೇಷವಾಗಿ ಸೋಮವಾರ ಪೂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ನಡೆಯುತ್ತದೆ. ಇವು ಹೆಚ್ಚಾಗಿ ಹರಕೆ ರೂಪದಲ್ಲಿ ನಡೆಯುತ್ತದೆ. ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಗಾಗಿ, ಬಾಲಗ್ರಹ ಪೀಡಿತ ಮಕ್ಕಳಿಗೆ ಅದರಿಂದ ವ್ಯಕ್ತಿಗಾಗಿ ವಿಶೇಷ ಪ್ರಾರ್ಥನೆ ಪ್ರಾರ್ಥಿಸಿ ಜೊತೆಗೆ ನಾಟಿ ಔಷಧಿ ಮಾಡುವುದರಿಂದಲೂ ಭಕ್ತಾದಿಗಳು ತಮ್ಮ ಅಭೀಷ್ಟ ನೆರವೇರಿಸಿಕೊಂಡಿದ್ದಾರೆ. ಈ ಸನ್ನಿಧಿಯಲ್ಲಿ ಮಕ್ಕಳಿಗೆ ಅನ್ನಪ್ರಾಶನವು ನಡೆಯುತ್ತದೆ. ಮೂಲ ದೇವರಿಗೆ ಶಕ್ತಿ ವರ್ಧಕರಾಗಿ ಮತ್ತು ಅಜ್ಞಾಪಾಲಕರಾಗಿ ಜಟಾಧಾರಿ ದೈವ, ಹುಲಿಭೂತ, ಧೂಮಾವತಿ, ಕೊರತಿ ದೈವಗಳು, ಸುತ್ತು ಪೌಳಿಯಸುತ್ತ ದೇವರಿಗೆ ಮುಖ ಮಾಡಿ ಇರುವುದನ್ನು ಕಾಣಬಹುದು. ಇವುಗಳಿಗೂ ಪ್ರತಿ ಸಂಕ್ರಾಂತಿ ದಿನ ಮತ್ತು ವಿಶೇಷವಾಗಿ ಸೋಮವಾರ ಪೂಜೆದಿನ ಹೋದ್ಲು, ಸೀಯಾಳ, ಸಮರ್ಪಿಸಿ ಪೂಜೆ ಮಾಡಲಾಗುವುದು. 2013ನೇ ಫೆಬ್ರವರಿ ತಿಂಗಳಲ್ಲಿ ದೇವಳದ ಪುನರ್ ನವೀಕರಣ ಅಷ್ಟಬಂಧ ಬ್ರಹ್ಮಕಲಶ ನಡೆದಿದೆ.

ಸಿಂಹ ಮಾಸದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ ಮತ್ತು ವೃತದಾರಿಗಳಿಗೆ ಹಾಗೂ ಭಕ್ತಾದಿಗಳಿಗೆ ಬಲಿವಾಡು ಕೂಟದ ಮೂಲಕ ಅನ್ನಸಂತರ್ಪಣೆ ನಡೆಯುತ್ತದೆ. ಗಣೇಶ ಚತುರ್ಥಿ ದಿನ ದೇವಾಲಯದಲ್ಲಿ ಭತ್ತದ ತೆನ ತುಂಬಿಸಿ (ಕದಿರುಕಟ್ಟುವುದು) ಶ್ರೀದೇವರಿಗೆ ನವಾನ್ನ ನೈವೇದ್ಯವು ನಡೆಯುತ್ತದೆ. ಈ ಸಂದರ್ಭದಲ್ಲಿ ಅನೇಕರು ತಮ್ಮ ಮನೆಗಳಿಗೂ ಕಟ್ಟುವುದಕ್ಕಾಗಿ ತೆನೆ ತೆಗೆದುಕೊಳ್ಳುತ್ತಾರೆ. ವರ್ಷದಲ್ಲಿ ಎರಡು ಜಾತ್ರೆಯು ಈ ದೇವಾಲಯದಲ್ಲಿ ವಿಶೇಷ, ಒಂದು ಕಾರ್ತಿಕ ಹುಣ್ಣಿಮೆ ದಿನ ಮತ್ತೊಂದು ವೃಷಭ ಮಾಸದ ಹತ್ತನೇ ದಿನ (ಪತ್ತನಾಜೆ) ಕಾರ್ತಿಕ ಹುಣ್ಣಿಮೆ ದಿನ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯವು ಬೆಟ್ಟಂಪಾಡಿ ಗ್ರಾಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವು ಹೌದು. ವಾರಕೊಮ್ಮೆ ಭಜನೆ ಹಾಗೂ ವಿಶೇಷ ದಿನಗಳಲ್ಲಿ ಹವ್ಯಾಸಿ ಕಲಾವಿದರ ಕೂಟದಿಂದ ಯಕ್ಷಗಾನ ತಾಳಮದ್ದಳೆ ನಡೆಯುತ್ತದೆ.